ನೈರೋಬೀ
ಪೂರ್ವ ಆಫ್ರಿಕದಲ್ಲಿರುವ ಕೀನ್ಯ ಗಣರಾಜ್ಯದ ರಾಜಧಾನಿ. ಕೀನ್ಯದ ದಕ್ಷಿಣ ಮಧ್ಯಭಾಗದಲ್ಲಿ ದ.ಅ.1(17 ಮತ್ತು ಪೂ.ರೇ. 36(49 ಮೇಲೆ ಗಿಕುಯೂ ತಪ್ಪಲಿನಲ್ಲಿ ಹಿಂದೂ ಸಾಗರದ ಮೇಲಣ ಮೊಂಬಾಸ ಬಂದರಿನ ವಾಯುವ್ಯಕ್ಕೆ 480 ಕಿಮೀ. ದೂರದಲ್ಲಿ ಇದೆ. ಜನಸಂಖ್ಯೆ 5,35,200 (1972 ಅಂ). ನೈರೋಬೀ ಪ್ರದೇಶ ಅದರ ಸುತ್ತಣ ಪ್ರಾಂತ್ಯದಿಂದ ಪ್ರತ್ಯೇಕವಾದ ವಿಭಾಗವಾಗಿದೆ. ಇದರ ವಿಸ್ತೀರ್ಣ 676 ಚ.ಕಿಮೀ. ನೈರೋಬೀ ಪ್ರದೇಶದ ಆಡಳಿತಕ್ಕೆ ನಗರ ಸಮಿತಿಯೊಂದು ಇದೆ. ಸಮುದ್ರ ಮಟ್ಟದಿಂದ ಸುಮಾರು 1,676 ಮೀ ಎತ್ತರದಲ್ಲಿರುವ ನೈರೋಬಿಯ ವಾಯುಗುಣ ಹಿತಕರವಾದದ್ದು. ಅದರ ನಡುಹಗಲಿನ ಉಷ್ಣತೆ ಎಂದೂ 27(ಅಯನ್ನು ಮೀರುವುದಿಲ್ಲ. ವಾರ್ಷಿಕ ಸರಾಸರಿ ಮಳೆ 635 ಮಿಮೀ. ಇದರಲ್ಲಿ ಅರ್ಧದಷ್ಟು ಬೀಳುವುದು ಮಾರ್ಚ್-ಮೇ ಅವಧಿಯಲ್ಲಿ.

19ನೆಯ ಶತಮಾನದಲ್ಲಿ ಈ ಪ್ರದೇಶದಲ್ಲಿ ರೈಲುಮಾರ್ಗ ನಿರ್ಮಾಣವಾಯಿತು 1899ರಲ್ಲ ಇಲ್ಲಿಯ ವರೆಗೆ ರೈಲುಮಾರ್ಗ ವಿಸ್ತರಿಸಿತು. ಇಲ್ಲಿ ವ್ಯಾಪಾರ ವಸತಿ ಬೆಳೆದುವು. 1905ರಲ್ಲಿ ಸರ್ಕಾರವನ್ನು ಮೊಂಬಾಸದಿಂದ ನೈರೋಬಿಗೆ ವರ್ಗಾಯಿಸಲಾಯಿತು. 1919ರಲ್ಲಿ ಇಲ್ಲಿ ಪೌರಸಭೆ ಆರಂಭವಾಯಿತು. ಇದು ನಗರವಾದ್ದು 1950ರಲ್ಲಿ.

ನೈರೋಬೀ ಪೂರ್ವ ಆಫ್ರಿಕದ ಪ್ರಮುಖನಗರ ; ಹಣಕಾಸು, ಕೈಗಾರಿಕೆ ಮತ್ತು ವಾಣಿಜ್ಯದ ಕೇಂದ್ರ. ಇದು ಪೂರ್ವ ಆಫ್ರಿಕದ ಮುಖ್ಯ ರೈಲ್ವೆ ಕೇಂದ್ರ. ಇತರ ಪ್ರಮುಖ ಕೇಂದ್ರಗಳೊಂದಿಗೆ ಇದಕ್ಕೆ ರಸ್ತೆ ಸಂಪರ್ಕವಿದೆ. ನೈರೋಬಿಯ ನೈಋತ್ಯಕ್ಕೆ ಸುಮಾರು 14 ಕಿಮೀ. ದೂರದಲ್ಲಿರುವ ಎಂಬಾಕಾಸಿ ಎಂಬುದು ಅಂತರರಾಷ್ಟೀಯ ವಿಮಾನ ನಿಲ್ದಾಣ. ನೈರೋಬೀ ಒಂದು ಪ್ರವಾಸಿ ಕೇಂದ್ರ. ಜಾನುವಾರುಗಳನ್ನು ಸಾಕುವುದು ಇದರ ಸುತ್ತಣ ಪ್ರದೇಶದಲ್ಲಿ ಒಂದು ಪ್ರಮುಖ ಉದ್ಯೋಗ. ಮಾಂಸವೇಷ್ಟನ, ಹಣ್ಣುಗಳ ಡಬ್ಬೀಕರಣ. ಹಿಟ್ಟು ಮಾಡುವುದು, ತಂಬಾಕಿನ ಸರಕು, ಆಹಾರ ಪದಾರ್ಥ, ರೈಲು ಮತ್ತು ಲಘುಯಂತ್ರ ತಯಾರಿಕೆ, ಚರ್ಮ ಹದಗಾರಿಕೆ, ಮದ್ಯ ತಯಾರಿಕೆ ಇವು ಇಲ್ಲಿಯ ಪ್ರಮುಖ ಕೈಗಾರಿಕೆಗಳು. ಕೀನ್ಯದ ಮೂಲ ಉತ್ಪನ್ನಗಳು ಇಲ್ಲಿಂದಲೇ ಮೊಂಬಾಸ ಬಂದರಿನ ಮೂಲಕ ಪರದೇಶಗಳಿಗೆ ರಫ್ತಾಗುತ್ತದೆ. ಕೀನ್ಯದ ಅಮದುಗಳು ದೇಶದಲ್ಲಿ ಇಲ್ಲಿಂದ ಹಂಚಿಕೆಯಾಗುತ್ತದೆ. ನೈರೋಬೀ ರಾಷ್ಟ್ರೀಯ ಉದ್ಯಾನ ಈ ನಗರದ ಹೊರವಲಯದಲ್ಲಿದೆ. ಸಿಂಹ, ಜಿಂಕೆ, ಜಿರಾಫೆ, ನೀರುಕುದುರೆ ಮತ್ತು ಇತರ ವನ್ಯಮೃಗಗಳನ್ನು ಇಲ್ಲಿ ರಕ್ಷಿಸಲಾಗಿದೆ.

ನೈರೋಬಿನಲ್ಲಿ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಪೂರ್ವ ಆಫ್ರಿಕ ವಿಶ್ವವಿದ್ಯಾಲಯಕ್ಕೆ ಸೇರಿದ ರಾಯಲ್ ಕಾಲೇಜ್ ಇದೆ.

ಎರಡನೆಯ ಮಹಾಯುದ್ಧದ ಅನಂತರ ನೈರೋಬೀ ಬಹಳ ಬೆಳೆದಿದೆ. ಕಾಮನ್ ಸರ್ವಿಸಸ್ ಆರ್ಗನೈಸೇಷನ್ನಿನ ಮುಖ್ಯ ಠಾಣ್ಯ, ಪಾರ್ಲಿಮೆಂಟ್ ಭವನ, ಅಂತರ ರಾಷ್ಟ್ರೀಯ ಸಮ್ಮೇಳನ ನಡೆಸಲು ಅನುಕೂಲವಾಗುವಂತೆ ವಿಶಾಲವಾಗಿ ನಿರ್ಮಿಸಲಾದ ಪುರಭವನ-ಇವು ಗಮನಾರ್ಹ ಕಟ್ಟಡಗಳು. ಕೀನ್ಯದ ರಾಷ್ಟ್ರೀಯ ರಂಗಮಂದಿರ, ಸಾಂಸ್ಕøತಿಕ ಕೇಂದ್ರ, ಪೂರ್ವ ಆಫ್ರಿಕ ಸಾರ್ವಜನಿಕ ಸಂಗೀತ ಶಿಕ್ಷಣ ಶಾಲೆ. ಕಾರಿಂಡನ್ ಸ್ಮಾರಕ ವಸ್ತುಸಂಗ್ರಹಾಲಯ ಸಾರ್ಸ್‍ಬಿ ಕಲಾ ಮಂದಿರ ಹಾಗೂ ಅನೇಕ ಸಂಘ ಸಂಸ್ಥೆಗಳು ಇಲ್ಲಿವೆ.
	(ಜಿ.ಕೆಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ